ತಾಂಪ್ಸನ್, ಫ್ರಾನ್ಸಿಸ್	
	1859-1907 ಆಂಗ್ಲ ಕವಿ, ವೈದ್ಯನೊಬ್ಬನ ಮಗ, ಹುಟ್ಟಿದ್ದು ಪ್ರೆಸ್ಟನ್ನಿನಲ್ಲಿ, ತಂದೆ ಕ್ಯಾತೊಲಿಕ್ ಮತಾನುಯಾಯಿಯಾದ ಬಳಿಕ ಆ ಮತಕ್ಕನುಸಾರವಾಗಿ ಪಾದ್ರಿಯಾಗಲು ಡರ್ಯಾಮಿನ ಉಷಾ ಕಾಲೇಜಿನಲ್ಲಿ ಶಿಕ್ಷಣ ಪಡೆಯತೊಡಗಿದ. ಆದರೆ ಪಾದ್ರ್ರಿ ಕೆಲಸ ಈತನ ಸ್ವಭಾವಕ್ಕೆ ಸರಿಬೀಳದೆ ಅದನ್ನು ಬಿಟ್ಟು ವೈದ್ಯಕೀಯ ಅಭ್ಯಾಸಕ್ಕಾಗಿ ಮ್ಯಾಂಚೆಸ್ಟರಿನ ಒವನ್ಸ್ ಕಾಲೇಜನ್ನು ಸೇರಿ ಅಲ್ಲಿ ಆರು ವರ್ಷ ಓದಿದ. ಆ ಶಿಕ್ಷಣದಲ್ಲೂ ಆಸ್ಥೆ ತೋರಿಸದೆ ಮೂರು ಬಾರಿ ನಪಾಸಾಗಿ ಲಂಡನ್ ಸೇರಿದ. ಅಲ್ಲಿ ಶಾರೀರಿಕ ಅಸ್ವಸ್ಥತೆಯಿಂದ ಬಳಲಿ ಅಫೀಮಿನ ಚಟವನ್ನು ಅಂಟಿಸಿಕೊಂಡ. ಬಡತನದಿಂದಾಗಿ ಬೆಂಕಿಪೆಟ್ಟಿಗೆ, ವೃತ್ತ ಪತ್ರಿಕೆಗಳನ್ನು ಮಾರಾಟ ಮಾಡುವ ವೃತ್ತಿಗಿಳಿದ, ಕೊನೆಗೆ ಬೂಟು ತಯಾರಕನೊಬ್ಬನಲ್ಲಿ ಕೆಲಸಕ್ಕೆ ನಿಂತು ಕವಿತೆಗಳನ್ನು ಬರೆಯತೊಡಗಿದ. 1888ರಲ್ಲಿ ವಿಲ್ಫ್ರೆಡ್ ಮೈನೆಲ್ ಎಂಬಾತ ಮೆರಿ ಇಂಗ್ಲೆಂಡ್ ಪತ್ರಿಕೆಯಲ್ಲಿ ಈತನ ಎರಡು ಕವಿತೆಗಳನ್ನು ಪ್ರಕಟಿಸಿದ. ಅವು ರಾಬರ್ಟ್ ಬ್ರೌನಿಂಗನ ಮೆಚ್ಚಿಗೆಗೆ ಪಾತ್ರವಾದುವು. ಮೈನೆಲ್ ದಂಪತಿಗಳು ಈತನ್ನು ಆಸ್ಪತ್ರೆಗೆ ಸೇರಿಸಿ ಅಫೀಮು ಚಟದಿಂದ ಮುಕ್ತವಾಗುವುದಕ್ಕೆ ನೆರವಾದರು. ಅವರಿಂದಾಗಿಯೇ ಈತ ಪೊಯೆಮ್ಸ್ ಎಂಬ ಕವಿತೆಗಳ ಸಂಪುಟವನ್ನು ಪ್ರಕಟಿಸಲು (1893) ಸಾಧ್ಯವಾಯಿತು. ದಿ ಹೌಂಡ್ ಆಫ್ ಹೆವನ್ ಎಂಬ ಈತನ ಸುಪ್ರಸಿದ್ಧ ಕವಿತೆ ಈ ಸಂಪುಟದಲ್ಲಿ ಸೇರಿದೆ. ಮನುಷ್ಯ ಎಷ್ಟೇ ಕಷ್ಟಪಟ್ಟು ಬೇರೆ ದಾರಿಯಲ್ಲಿ ಹೋಗ ಬಯಸಿದರೂ ದೈವೀಪ್ರೇಮ ಬೇಟೆಯ ನಾಯಿಯಂತೆ ಅವನನ್ನು ಅಟ್ಟಿಬಂದು ಸನ್ಮಾರ್ಗಕ್ಕೆ ಎಳೆಯುತ್ತದೆ ಎಂಬುದು ಈ ಕವನದ ವಸ್ತು. ಅನಂತರ ಮೈನೆಲ್ ದಂಪತಿಗಳ ಮಕ್ಕಳಿಗೆ ನಿವೇದಿತವಾದ ಸಿಸ್ಟರ್ ಸಾಂಗ್ಸ್ (1895) ಕವನಗಳು ಪ್ಯಾಟ್ಮೊರನಿಗೆ ನಿವೇದಿತವಾದ ನ್ಯೂ ಪೊಯೆಮ್ಸ್ (1897) ಪ್ರಕಟವಾದವು. ಈತ ಅನೇಕ ಗದ್ಯಕೃತಿಗಳನ್ನೂ ರಚಿಸಿದ. ಅವುಗಳಲ್ಲಿ ಹೆಲ್ತ್ ಅಂಡ್ ಹೋಲಿನೆಸ್(1905) ಎಂಬುದು ಸಂನ್ಯಾಸಿ ಜೀವನದ ಮೇಲಿನ ಪ್ರಬಂಧವಾಗಿದೆ. ಲೈಫ್ ಆಫ್ ಸೇಟ್ ಇಗ್ನೇಷಿಯಸ್ ಲಯೊಲಾ (1909). ಲೈಫ್ ಆಫ್ ಬ್ಲೆಸೆಡ್ ಜಾನ್ ಬ್ಯಾಪ್ಟಿಸ್ಟ್ ಡೆಲಾಗೌಲೆ (1911) ಹಾಗೂ ಎಸ್ಸೇ ಆನ್ ಷೆಲೆ (1909)- ಇವು ಈತನ ಇತರ ಗದ್ಯಕೃತಿಗಳು. 1893 ರಿಂದ 1897 ರ ನಡುವಿನ ಹೆಚ್ಚು ಕಾಲವನ್ನು ಈತ ಉತ್ತರ ವೇಲ್ಸಿನಲ್ಲಿರುವ ಫ್ರಾನ್ಸಿಸ್ಕನ್ ಸಂನ್ಯಾಸಿಗಳ ಮಠದ ಸಾಮೀಪ್ಯದಲ್ಲಿ ಕಳೆದ. 

	ತಾಂಪ್ಸನ್ನನ ಭಾಷೆಯಲ್ಲಿ ಆಡಂಬರ ಹೆಚ್ಚು, ಶೈಲಿ ಅಲಂಕಾರ ಪೂರ್ಣ, ಕ್ಲಿಷ್ಟ. 		(ಜಿ,ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ